ಸೂಕ್ಷ್ಮ ಕತೆಗಾರಿಕೆಯಿಂದ ಮತ್ತು ತನ್ನ ಕಾದಂಬರಿಗಳಿಂದ ಹೆಸರುವಾಸಿಯಾಗಿರುವ ಗುರುಪ್ರಸಾದ ಕಾಗಿನೆಲೆ ಅವರ ಕಥಾಸಂಕಲನವಿದು. ಅಮೆರಿಕ ಮತ್ತು ಭಾರತವೆರಡೂ ಸಮಾನ ಅವಕಾಶಗಳನ್ನು ಪಡೆಯುವ ಈ ಕತೆಗಳಲ್ಲಿ ಎರಡೂ ಜಗತ್ತುಗಳನ್ನು ಹೊಸ ಕಣ್ಣುಗಳಿಂದ ನೋಡುವುದು ಸಾಧ್ಯವಾಗಿದೆ. ತನ್ನ ವೈದ್ಯಕೀಯ ಜಗತ್ತಿನ ಅನುಭವಗಳನ್ನೂ ಲೇಖಕರು ವಿವರವಾಗಿ ಪರಿಚಯಿಸುವುದರಿಂದ ಮೂರನೆಯ ಜಗತ್ತಿನ ಅನಾವರಣವನ್ನೂ ಈ ಕತೆಗಳು ಮಾಡಿಕೊಡುತ್ತವೆ.----------------------------------’ಧರ್ಮಾರ್ಥ’ ಕತೆಯಲ್ಲಿ ಶ್ರೀನಿವಾಸನ ’ಅರ್ಥ’ದ ಅಗತ್ಯಗಳು ಮತ್ತು ಲೌಕಿಕ ಸುಖಗಳು ಈಡೇರುವಂತಾದರೆ ಮಾತ್ರ ಅವನಿಂದ ತಮ್ಮ ’ಧರ್ಮ’ದ ಅಗತ್ಯಗಳು ಮತ್ತು ಪಾರಮಾರ್ಥಿಕ ಅಭಿಲಾಷೆಗಳು ಪೂರೈಸುತ್ತವೆ ಎಂಬ ತಿಳಿವಳಿಕೆಯಲ್ಲಿ ನಿರೂಪಕನು ಅರ್ಚಕನ ಅಗತ್ಯಗಳನ್ನು ಮನವರಿಕೆ ಮಾಡಿಕೊಂಡು ಅವನ್ನು ಈಡೇರಿಸಲು ಮುಂದಾಗುತ್ತಾನೆ. ಅಂದರೆ ನಿರೂಪಕ ಮತ್ತು ಅವನಂಥ ಭಾರತೀಯರಿಗೆ ಅಮೆರಿಕನ್ ಆವರಣದಲ್ಲಿ ತಮ್ಮ ’ಭಾರತೀಯತೆ’ಯನ್ನು ಹೇಗಾದರೂ ಉಳಿಸಿಕೊಳ್ಳಬೇಕಾಗಿದೆ. ಈಗಷ್ಟೇ ಭಾರತದಿಂದ ಅಮೆರಿಕಕ್ಕೆ ಬಂದಿರುವ ಅರ್ಚಕ ಶ್ರೀನಿವಾಸನಿಗೆ ಅಮೆರಿಕದ ಬದುಕಿನ ಸುಖಸೌಲಭ್ಯಗಳು ದೊರಕದೆ ಅವನು ಅಲ್ಲಿ ಇರಲಾರ. ಈ ದ್ವಂದ್ವವ್ಯಂಗ್ಯ ’ಧರ್ಮಾರ್ಥ’ದ ಅತ್ಯಂತ ಸ್ವಾರಸ್ಯಕರ ಅಂಶವಾಗಿದೆ.-ಟಿ.ಪಿ. ಅಶೋಕ ----------------------------------ದೇವರೆಂಬ ಸೂಕ್ಷ್ಮ ವಿಷಯದ ಕಥೆ ಹೇಳುವಾಗ ನೀವು ಸಾಧಿಸಿದ ಸಮಚಿತ್ತ ಅದ್ಭುತ. ಎಲ್ಲವನ್ನೂ ವ್ಯಂಗ್ಯವಾಗೇ ಹೇಳುತ್ತಿದ್ದೀರಿ ಅನ್ನಿಸಿದರೂ ನೀವು ಹೇಳುತ್ತಿಲ್ಲ. ತಮಾಷೆ ಅನ್ನಿಸುವ ಸನ್ನಿವೇಶಗಳನ್ನೂ ನೀವು ’ಇರುವ ಫ್ಯಾಕ್ಟ್ ಹೀಗೆ’ ಎನ್ನುವಷ್ಟಕ್ಕೇ ಸೀಮಿತಗೊಳಿಸುತ್ತೀರಿ. (ಉದಾಹರಣೆಗೆ- ಪ್ರಹ್ಲಾದನ ಬೇಸ್ಮೆಂಟ್ ದೇವರ ಮನೆಯ ಕಥೆಯೇ ಆಗಲಿ ಶ್ರೀನಿವಾಸನ ಚರ್ಚ್ ಗುಡಿಯ ವ್ಯಥೆಯೇ ಆಗಲಿ).ಅದನ್ನೇನಾದರೂ ತಮಾಷೆ ಅಥವಾ ಅಪಹಾಸ್ಯದ ’ಟೋನ್’ನಲ್ಲಿ ನೀವು ಹೇಳಿದ್ದೇ ಆಗಿದ್ದರೆ ಕಥೆ ಬೇರೆಯದನ್ನೇ ಧ್ವನಿಸುತ್ತಿತ್ತು. ಇದು ಬಹು ಬುದ್ಧಿಮತ್ತೆಯ ನಾಜೂಕಿನ ಕಥೆಯ ಕುಸುರಿ.-ಕರ್ಕಿ ಕೃಷ್ಣಮೂರ್ತಿ – ’ದೇವರ ರಜಾ’ ಮತ್ತು ’ಧರ್ಮಾರ್ಥ’ ಕತೆಯ ಬಗ್ಗೆ ----------------------------------ಇಲ್ಲಿಯ ಬಹಳಷ್ಟು ಕತೆಗಳಲ್ಲಿ ಪಾತ್ರಗಳು ತಮ್ಮ ಸಹಪಾತ್ರಗಳ ಜೊತೆಗೆ ಅಥವಾ ತಾವು ನಂಬಿಕೊಂಡಿದ್ದ ಧೋರಣೆಗಳ ಪರವಾಗಿ ಸಂಧಾನ ಮಾಡಿಕೊಳ್ಳುತ್ತವೆ ಎಂಬ ಸಂಗತಿ ವಿಶೇಷವಾದುದು. ಉದಾಹರಣೆಗೆ ಶಾಲಿನಿಯ ಜೊತೆಗೆ ಸಂಧಾನ ಮಾಡಿಕೊಳ್ಳುವ ಪ್ರಹ್ಲಾದ ಸಂಜೀವ ನಾಯಕನ ಪರವಾಗಿ ನಿಲ್ಲುವ ಜಾನಕಿ ಕೊನೆಗೂ ತಾನು ನಂಬಿದ್ದೇ ಸತ್ಯವೆಂದು ವಾದಿಸುವ ಡಾ.ವೆಂಕಟರಮಣ ರಾಮರಾಯರ ಹಠಕ್ಕೆ ಕಟ್ಟುಬಿದ್ದು ಅವರ ಮಾತಿಗೆಲ್ಲಾ ಅಸ್ತು ಎನ್ನುವ ಆನಂದ ಮತ್ತು ಛಾಯ ಬಿಗ್‍ಸೇವ್‍ಗಾಗಿ ಕಾಯುವ ಡಾಕ್...ಹೀಗೆ. ಆದರೆ ಕೆಲ ಪಾತ್ರಗಳು ಮಾತ್ರ ಒಮ್ಮೆಲೇ ತಮ್ಮ ಆಯ್ಕೆಗಳಿಂದ ಬಿಡುಗಡೆ ಪಡೆದು ಬಿಡುತ್ತವೆ. ಋಷಿಪಂಚಮಿ ಮಾಡಿಕೊಂಡ ಮೊಂಡುವಾದದ ವೃದ್ಧೆ ಪದ್ದಕ್ಕ ಅನಾಮತ್ತಾಗಿ ಬೂಬಮ್ಮನ ಮಗುವನ್ನು ಮುಟ್ಟಿ ನೆಟಿಗೆ ತೆಗೆದು ಆ ಬಿಡುಗಡೆ ಪಡೆಯುವುದನ್ನು ಕಾಣಬಹುದು. ಇದೇ ಕಾರಣಕ್ಕಾಗಿ ’ಆಟ’ ಕತೆಯಲ್ಲಿ ಏನಾದರಾಗಲಿ ತಾನು ಮಗನ ಮನಸ್ಸಿಗೆ ನೋವನ್ನುಂಟು ಮಾಡಬಾರದೆಂದು ಓಮಾರನ ಜೊತೆಗಾದರೂ ಮ್ಯಾಚ್ ನೋಡುವವನೇ ಎಂದು ಹಠ ಹಿಡಿಯುವ ರಾಘವನ ಪಾತ್ರ ಕೂಡ ವೈಶಿಷ್ಟ್ಯಪೂರ್ಣವಾಗಿದೆ.-ಕಾವ್ಯಾ ಕಡಮೆA Kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.