ಶಾಂತಿ ಕೆ. ಅಪ್ಪಣ್ಣ ಅವರ ಕತೆಗಳು ಮಂದ್ರ ಆಲಾಪದಂತೆ ಆರಂಭವಾಗಿ ರಾಗದ ಒಳಸುಳಿಗಳನ್ನು ಹೊಕ್ಕು ಅದರ ಭೋರ್ಗರೆತವನ್ನು ದರ್ಶನಮಾಡಿಸುತ್ತ ತೀವ್ರವಾದ ಭಾವವನ್ನು ಉಕ್ಕಿಸಿ ಕೊನೆಯಾಗುತ್ತವೆ. ಈ ಕತೆಗಳ ಓದು ನಮ್ಮನ್ನು ಸಂಗೀತದಂತೆ ಪೂರ್ತಿಯಾಗಿ ಆವರಿಸಿಕೊಳ್ಳುತ್ತದೆ. ಪ್ರತಿಯೊಂದು ಕತೆಯೂ ಒಂದು ಉತ್ಕಟ ಭಾವ ಸಂಚಾರ. ಮನುಷ್ಯ ಸಂಬಂಧಗಳು ಬೆಸೆದುಕೊಳ್ಳುವ ಹಾಗೂ ಬೇರ್ಪಡುವ ಕ್ರಿಯೆಯಲ್ಲಿ ಬೇಯುವ ನೋಯುವ ಜೀವದ ಅನಂತ ಮಗ್ಗಲುಗಳನ್ನು ತೆರೆದಿಡುತ್ತ ಚಕಿತಗೊಳಿಸುತ್ತವೆ. ಕತೆಯೊಡಲಿನಲ್ಲಿ ಶಾಂತಿ ಕಾಣಿಸುವ ಜೀವನ ದರ್ಶನ ಗಹನವಾದುದುದು. ಆದರೆ ಅದು ಎಲ್ಲೂ ಒಣ ತತ್ವಜ್ಞಾನವಾಗದಂತೆ ಕಾಪಿಡುವ ಕಲೆ ಅವರಿಗೆ ಸಿದ್ದಿಸಿದೆ. ಅವರ ಭಾಷೆಯ ಧ್ವನಿಶಕ್ತಿ ಕಾವ್ಯಗುಣವನ್ನು ಕತೆಗಳಿಗೆ ನೀಡಿದೆ. ಮನುಷ್ಯರ ಒಳಜಗತ್ತಿನ ಕತ್ತಲ ಮೂಲೆಗಳಿಗೆ ಬೆಳಕುಬೀರುವ ಕತೆಗಳು ತರ್ಕದ ರೂಢಿಗತ ವಿನ್ಯಾಸಗಳಿಗೆ ಒಲಿಯದೇ ತಮ್ಮನ್ನು ಬಹುಸೂಕ್ಷ್ಮವಾಗಿ ಶೋಧಿಸಿಕೊಳ್ಳಬೇಕೆಂಬ ಜರೂರನ್ನು ನಮ್ಮೊಳಗೆ ಹುಟ್ಟಿಸುತ್ತವೆ. ಅವರ ಕತೆಯೊಂದರ ಹೆಸರು ‘ಮುಟ್ಟುವಷ್ಟು ಹತ್ತಿರ ಮುಟ್ಟಲಾರದಷ್ಟು ದೂರ’. ಇದು ಶಾಂತಿಯವರ ಅನೇಕ ಕತೆಗಳ ಅನುಭೂತಿಯನ್ನು ಪದಗಳಲ್ಲಿ ಕಟ್ಟಿಕೊಟ್ಟ ಸಾಲಿನಂತಿದೆ. ಇಲ್ಲೇ ನಮ್ಮೊಳಗೇ ಸುಳಿದಾಡುವಂತಿರುವ ಕತೆಗಳು ನೋಡನೋಡುತ್ತಿದ್ದಂತೇ ಧ್ಯಾನಸ್ಥಗೊಂಡು ನಮ್ಮನ್ನೂ ತಮ್ಮೊಳಗೆ ಸೆಳೆದುಕೊಂಡುಬಿಡುತ್ತವೆ. ಶಾಂತಿಯವರ ಕತೆಗಳು ಕಾಲದ ಸಿದ್ಧಾಂತಗಳ ಹಂಗಿಲ್ಲದೇ ತನ್ನ ಪಾತ್ರವನ್ನು ಹಿಗ್ಗಿಸಿಕೊಳ್ಳುತ್ತ ಹರಿಯುವ ನದಿಯಂತೆ ನಿರುಮ್ಮಳವಾಗಿವೆ. ಯಾವ ಕಟ್ಟಿಗೂ ನಿಲುಕದ ಸ್ವತಂತ್ರಪ್ರಜ್ಞೆಯೇ ಅವುಗಳ ಸೌಂದರ್ಯ ಹಾಗೂ ಶಕ್ತಿ. ಕನ್ನಡ ಕಥಾಜಗತ್ತಿನಲ್ಲಿ ತಮ್ಮ ಗುರುತನ್ನು ವಿಶಿಷ್ಟವಾಗಿ ಮೂಡಿಸುತ್ತಿರುವ ಶಾಂತಿ ಅಪ್ಪಣ್ಣರವರ ಬರಹಗಳು ಹೆಣ್ಣುಮಕ್ಕಳು ಬರೆವ ಕತೆಗಳು ‘ಹೀಗೇ ಇರುತ್ತವೆಂಬ’ ಏಕತಾನವನ್ನು ಮುರಿದು ಬಹುಸ್ವರಗಳಲ್ಲಿ ಹರಡಿಕೊಂಡು ಕುತೂಹಲವನ್ನು ಉಳಿಸುತ್ತದೆ.- ಗೀತಾ ವಸಂತA Kannada Book by Chanda Pustaka/ ಛಂದ ಪುಸ್ತಕದ ಪ್ರಕಟಣೆ
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.